ರಾಂಕೆ, ಲಿಯೋಪೋಲ್ಡ್ ಫಾನ್		
1795 - 1886. ಜರ್ಮನಿಯ ಇತಿಹಾಸಕಾರ. ಮಧ್ಯ ಜರ್ಮನಿಯ ತೂರಿಂಜಿಯದ ವೀಯೆ ಎಂಬಲ್ಲಿ ಹುಟ್ಟಿದ. ಚರಿತ್ರಕಾರರು ಇತಿಹಾಸವನ್ನು ವಿಮರ್ಶಾತ್ಮಕವಾಗಿ ಮತ್ತು ವಿಷಯಾತ್ಮಕವಾಗಿ ನೋಡಬೇಕೆಂದು ಪ್ರತಿಪಾದಿಸಿದ ಇವನನ್ನು ಆಧುನಿಕ ಇತಿಹಾಸ ಸ್ಕೂಲಿನ ಸಂಸ್ಥಾಪಕನೆಂದು ಪರಿಗಣಿಸಲಾಗಿದೆ. ಇತಿಹಾಸವನ್ನು ಪುರಾಣ ಅಥವಾ ದಂತಕಥೆಗಳ ಆಧಾರದ ಮೇಲೆ ರಚಿಸದೆ ಆಕರ ಸಾಮಗ್ರಿಗಳಿಂದ ರಚಿಸಬೇಕೆಂದು ಈತ ಹೇಳಿದ. ಇತಿಹಾಸ ಬೋಧಿಸುವಲ್ಲಿ ವಿಚಾರಗೋಷ್ಠಿಯ ತಂತ್ರವನ್ನು ಈತ ಪರಿಚಯಿಸಿದ. 1848 ರಲ್ಲಿ ಅನಂತರ ಇತಿಹಾಸ ಬೋಧನೆಯಲ್ಲಿ ರಾಂಕೆಯ ಈ ಕ್ರಮವನ್ನು ಜಮರ್ನ್ ಇತಿಹಾಸಕಾರರು ವ್ಯಾಪಕವಾಗಿ ಅನುಸರಿಸಿದರು.

ಲ್ಯಾಟಿನ್ ಮತ್ತು ಗ್ರೀಕ್ ಕಾವ್ಯಗಳನ್ನು ಬೋಧಿಸುವ ಅಧ್ಯಾಪಕನಾಗಿ ಜೀವನ ಪ್ರಾರಂಭಿಸಿದ ಈತ ಅನಂತರ ಗ್ರೀಕ್ ಮತ್ತು ರೋಮನ್ ಇತಿಹಾಸಗಳ ಆಳವಾದ ಅಧ್ಯಯನ ನಡೆಸಿದ. ಜರ್ಮನಿ, ಇಂಗ್ಲೆಂಡ್, ಪ್ರಷ್ಯ, ಪ್ರಾನ್ಸ್, ದೇಶಗಳ ಚರಿತ್ರೆ ಬರೆದ. ಇತಿಹಾಸದಲ್ಲಿ ಕಲೆ ಮತ್ತು ವಿe್ಞÁನಗಳೆರಡೂ ಸೇರಿವೆ ಎಂದು ಈತ ಪ್ರತಿಪಾದಿಸಿದ. ಚರಿತ್ರೆ ಉತ್ತಮಕಾವ್ಯದಂತೆ ಮನರಂಜನೆಯನ್ನೂ ನೀಡಬೇಕೆಂದು ಹೇಳಿದ. ರಾಜಕಾರಣಿಗಳ ಜೀವನಚರಿತ್ರೆಯನ್ನು ರಚಿಸುವಾಗ ಈತ ವ್ಯಕ್ತಿಗಳ ಗುಣಗಳಿಗೆ ಪ್ರಾಧಾನ್ಯತೆ ನೀಡಿದ. ಹಿಸ್ಟರಿ ಆಫ್ ದಿ ರೂಮನ್ಸ್ ಅಂಡ್ ಟ್ಯೂಟಾನಿಕ್ ನೇಷನ್ಸ್ (1824) - ಇವನ ಮೊದಲ ಕೃತಿ. ಇದು ಈತನಿಗೆ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಪ್ರಾದ್ಯಾಪಕ ಹುದ್ದೆ ದೊರಕಿಸಿಕೊಟ್ಟಿತು. ಹಿಸ್ಟರಿ ಆಫ್ ದಿ ಪೋಪ್ಸ್, ಹಿಸ್ಟರಿ ಆಫ್ ದಿ ರಿಫಾರ್‍ರ್ಮೇಷನ್ ಇನ್ ಜರ್ಮನಿ-ಇವು ಈತನ ಇತರ ಕೃತಿಗಳು. ಈತನ ಬರೆವಣಿಗೆಯ ಶೈಲಿ ಹಾಗೂ ನಿರೂಪಣೆ ಉತ್ತಮವಾಗಿದೆ. ಈತ 23 ಮೇ 1886 ರಂದು ಬರ್ಲಿನ್ನಿನಲ್ಲಿ ನಿಧನ ಹೊಂದಿದ.
												 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ